ಬೆಳಿಗ್ಗೆ ಎದ್ದಾಗಿನಿಂದ ಯಾಕೋ ಮನಸ್ಸೇ ಸರಿ ಇಲ್ಲ, ಏನೋ ಬೇಸರ, ಭಯ, ಆತಂಕ, ದ್ವಂಧ್ವ, ಏನು ಕೆಲಸ ಮಾಡಲು ಮನಸ್ಸಿಲ್ಲ, ಕೆಲಸ ಮಾಡಿದರೂ ಎಲ್ಲಿ ತಪ್ಪು ಮಾಡಿಬಿಡುತ್ತೇವೋ ಎನ್ನುವ ಆತಂಕ, ಏನು ಮಾಡಬೇಕೆಂದು ತೋಚುತ್ತಿಲ್ಲ, ಇತ್ತೀಚೆಗೆ ಯಾಕೋ ಪದೇ ಪದೇ ಹೀಗೆ ಆಗುತ್ತಿರುತ್ತದೆ, ಕಾರಣ ಗೊತ್ತಾಗುತ್ತಿಲ್ಲ, ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿ ಜಗಳವಾಯ್ತು, ಯಾಕೋ ಶಕುನವೇ ಸರಿ ಇಲ್ಲ, ಒಂದು ರೀತಿ ಮನಸ್ಸಿಗೆ ಮಂಕು ಕವಿದಿದೆ, ಎಂದು ಕೆಲವೊಮ್ಮೆ ಮನಸ್ಸಿಗೆ ಅನ್ನಿಸಿ ಮಂಕಾಗಿ ಕುಳಿತಿರುತ್ತೇವೆ ಅಲ್ಲವೆ?
ಇದು ಕೆಲವೊಮ್ಮೆ ಬೆಳ್ಳಂಬೆಳಿಗ್ಗೆಯೇ ಶುರುವಾಗಿ ಇಡೀ ದಿನ ಕಾಡುತ್ತಿರುತ್ತದೆ. ಒಂದು ರೀತಿಯ ‘ಮಾರ್ನಿಂಗ್ ಫೋಬಿಯಾ! ರಾತ್ರಿ ಬಿದ್ದ ಯಾವುದೋ ನಮಗೆ ಸಂಬಂಧವಿಲ್ಲದ ಕನಸು, ಬೆಳಗಿನಜಾವದ ಕೆಟ್ಟ ಕನಸು, ರಾತ್ರಿ ಟೀವಿಯಲ್ಲಿ ನೋಡಿದ ಕ್ರೈಂ ಕಾರ್ಯಕ್ರಮದ ಪರಿಣಾಮ, ಬೆಳಗ್ಗೆ ಎದ್ದು ಹೊರಹೋದ ತಕ್ಷಣ ಕಂಡ ಎದುರು ಮನೆಯ ಬೆಕ್ಕು, ಅಥವಾ ಹಾಸಿಗೆಯಿಂದ ಏಳುವಾಗ ಎಡಗಡೆ ಎದ್ದದ್ದು, ಬೆಳಗ್ಗೆ ಎದ್ದ ಕೂಡಲೇ ಮೊಬೈಲಿಗೆ ಬಂದ ಯಾವುದೋ ಸಾವಿನ ಸುದ್ದಿ, ತುಂಬಾ ಸಮಯ ಮಲಗಿಬಿಟ್ಟೆ ಎಂದು ತಡಬಡಾಯಿಸಿ ಎದ್ದು ಕೂರುವ ಪರಿ, ಹೀಗೆ ಅನೇಕ ವಿಚಾರಗಳು ನಾವು ಎಷ್ಟೆ ಗಟ್ಟಿಗರೆಂದುಕೊಂಡರು ನಮ್ಮ ಮನಸ್ಸನ್ನು ಕೆಲವೊಮ್ಮೆ ಆತಂಕಕ್ಕೆ ದೂಡಿಬಿಡುತ್ತವೆ. ಬೆಳಗ್ಗೆ ಹಾಲು ತರಲು ಹೊರ ಹೋದಾಗ ಬೆಕ್ಕು ಅಡ್ಡ ಬಂತು ಎನ್ನುವ ವಿಚಾರ ನಮಗೆ ಗೌಣ ಎನಿಸಿದರೂ, ನಾವು ಅದನ್ನು ನಂಬುವುದಿಲ್ಲ ಎಂದು ಮನದಲ್ಲಿ ಅಂದು ಕೊಂಡರೂ ಒಂದು ದಿನ ನನಗೆ ಬೆಕ್ಕು ಅಡ್ಡ ಬಂದಿದ್ದರಿಂದ ನನಗೆ ಅಪಘಾತವಾಗಿತ್ತು ಗೊತ್ತಾ? ಎಂದು ಯಾರೋ ಹೇಳಿರುವ ‘ಒಂದು ಬೆಕ್ಕಿನ ಕಥೆ’ ನಮ್ಮನ್ನು ಒಂದು ಕ್ಷಣ ನಿಂತು ನಡೆಯುವಂತೆ ಮಾಡಿಬಿಡುತ್ತದೆ.
ಶಕುನ ಎನ್ನುವ ಈ ಪದ ಶುಭ ಮತ್ತು ಅಶುಭ ಎನ್ನುವ ಎರಡು ಭಾಗಗಳಾಗಿ ನಮ್ಮ ಕಿವಿಯಲ್ಲಿ ರಿಂಗಣಿಸುತ್ತಲೇ ಇರುತ್ತದೆ. ನಮ್ಮನ್ನು ಕಾಡುತ್ತಲೇ ಇರುತ್ತದೆ! ಅಶುಭ ಶಕುನಗಳು ಎಂದು ಪರಿಭಾವಿಸಿರುವ ಕೆಲವು ಉದಾಹರಣೆಗಳನ್ನು ಚರ್ಚಿಸುವುದಾದರೆ, ಒಳ್ಳೆಯ ಕಾರ್ಯಕ್ಕೆ ಹೊರಟಾಗ ಖಾಲಿ ಕೊಡ ಅಡ್ಡ ಬಂದರೆ, ಸೌದೆ ಅಡ್ಡ ಬಂದರೆ, ಬೆಕ್ಕು ಅಡ್ಡ ಬಂದರೆ, ಏನಾದರು ವಿಚಾರ ಮಾತನಾಡುವಾಗ ಒಂಟಿ ಸೀನು ಬಂದರೆ, ಮನೆಯಿಂದ ಹೊರಗೆ ಕಾಲಿಡುವಾಗ ಎಡವಿದರೆ, ಗಂಡಸರಿಗೆ ದೇಹದ ಎಡಭಾಗ, ಹೆಂಗಸರಿಗೆ ದೇಹದ ಬಲಭಾಗ ಅದುರಿದರೆ, ಮನೆಯಲ್ಲಿ ಕುಂಕುಮ ಅಕಸ್ಮಾತಾಗಿ ಚೆಲ್ಲಿಬಿಟ್ಟರೆ, ಒಂಟಿ ಕತ್ತೆ ಕಂಡು ಬಿಟ್ಟರೆ, ಕಾಗೆ ಮೈಗೆ ತಾಗಿಬಿಟ್ಟರೆ, ಹೀಗೆ ಅನೇಕ ನಂಬಿಕೆಗಳು ನಮಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುತ್ತವೆ. ಅವು ಮೂಢ ನಂಬಿಕೆಗಳಾ? ನಮ್ಮ ದುರ್ಬಲ ಮನಸ್ಥಿತಿಯ ಸಂಕೇತವಾ? ನಾವು ಕೇಳಿದ ಅಂತೆ-ಕಂತೆ ಕಥೆಗಳ ಪ್ರಭಾವವಾ? ಯೋಚಿಸಬೇಕಿದೆ.
ಇನ್ನು ಶುಭ ಶಕುನಗಳ ಬಗ್ಗೆ ಚರ್ಚಿಸುವುದಾದರೆ ಸುಮಂಗಲಿಯರು ಎದುರು ಸಿಕ್ಕರೆ, ನರಿ ಕಂಡರೆ, ತುಂಬಿದ ಕೊಡ ಎದುರಿಗೆ ಸಿಕ್ಕರೆ, ಹೀಗೆ ಬೆಳೆಯುತ್ತಾ ಹೋಗುತ್ತದೆ ಪಟ್ಟಿ. ಈ ರೀತಿಯ ಶುಭ ಶಕುನಗಳು ಬೆಳಗ್ಗೆ ಎದ್ದ ತಕ್ಷಣ ಅನೇಕರ ಮನಸ್ಸಿಗೆ ಪ್ರಫುಲ್ಲತೆ ಕೊಟ್ಟರೆ, ಅಶುಭ ಶಕುನಗಳು ಮನಸ್ಸಿಗೆ ಘಾಸಿ ಮಾಡಿ ಇಡೀ ದಿನದ ನೆಮ್ಮದಿಯನ್ನು ಕೆಡಿಸುವಂತಹದು.
ಇಂತಹ ಸಂದರ್ಭದಲ್ಲಿ ನಾವು ಯೋಚಿಸಬೇಕಿರುವುದು, ಊರಿನ ಮಧ್ಯೆ ಬದುಕುತ್ತಿರುವ, ವಾಸಿಸುತ್ತಿರುವ ನಮಗೆ ಬೆಳಗ್ಗೆ ಎದ್ದು ಹೊರ ಹೋದಾಗ ಬೆಕ್ಕು ಕಾಣಿಸದೆ ಹುಲಿ ಸಿಂಹಗಳು ಕಾಣಿಸಲು ಸಾಧ್ಯವೆ? ಎಂದು. ಊರು ಅಂದ ಮೇಲೆ ಜನ ಓಡಾಡುವುದು ಸಹಜ, ನೀರಿಗಾಗಿ ಖಾಲಿ, ಭರ್ತಿ ಕೊಡ ಹೊತ್ತೊಯ್ಯುವುದು ಕೂಡ ಮಾಮೂಲು, ರಸ್ತೆ ಅಂದ ಮೇಲೆ ಅಲ್ಲಿ ಎಲ್ಲ ರೀತಿಯ ಮಂದಿ ಓಡಾಡುತ್ತಾರೆ, ಬೆಳಿಗ್ಗೆ ಒಲೆ ಹಚ್ಚಲು ಸೌದೆ ಇಲ್ಲದಿದ್ದರೆ ಅದನ್ನು ಕೊಂಡೊಯ್ಯಲೇ ಬೇಕು, ಕುಂಕುಮ ಹಚ್ಚುವಾಗ ಕೈ ಜಾರುತ್ತದೆ, ಮನುಷ್ಯ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು, ದೇಹದಲ್ಲಿ ವಾಯು ಜಾಸ್ತಿಯಾದರೆ ಬಲವೋ? ಎಡವೋ? ಯಾವದೋ ಒಂದು ಭಾಗ ಅದುರುತ್ತದೆ, ಶೀತವದಾಗ ಒಂಟಿಯೋ, ಜಂಟಿಯೋ ಸೀನು ಬರುತ್ತದೆ, ನಡೆಯುವವರು ಎಡವುವುದು ಸಹಜ? ಅದಕ್ಕೆ ಶುಭ, ಅಶುಭ ಎನ್ನುವ ‘ಶಕುನ’ದ ಟ್ಯಾಗ್ ಅಂಟಿಸಿ ನಮ್ಮ ಮನಸ್ಸಿನ ನೆಮ್ಮದಿ ಹಾಳುಮಾಡಿಕೊಂಡು ಇಡೀ ದಿನ ಒದ್ದಾಡುವುದು ಎಷ್ಟು ಸರಿ?
ಇದು ನಾವು ಬೆಳೆದ ಪರಿಸರ, ಸಮಾಜ, ಭಯಗ್ರಸ್ಥ ಜನರ ಸಂಗ, ನಮ್ಮ ಕುಟುಂಬದ ಹಿನ್ನೆಲೆ, ನಾವು ಕೇಳಿದ ಕಥೆಗಳು, ಯಾರೋ ಬೆದರಿದ ಮಂದಿ ಅವರ ತಲೆಯಲ್ಲಿನ ಒತ್ತಡವನ್ನು ನಮ್ಮ ತಲೆಗೆ ವರ್ಗಾಯಿಸಿದ ಸಂದರ್ಭ, ಊಹಾಪೋಹದ ಕಥೆಗಳು ಇವೆಲ್ಲವೂ ಸೇರಿ ನಮ್ಮನ್ನು ಮತ್ತಷ್ಡು ಅಧೀರರನ್ನಾಗಿಸುತ್ತವೆ. ಇವು ಭಯ ಪಟ್ಟ ವ್ಯಕ್ತಿಯ ಮೇಲೆ ಹಗ್ಗ ಎಸೆದರೂ ಹಾವೆಂದು ಭ್ರಮಿಸುತ್ತಾರಲ್ಲ ಆ ರೀತಿಯ ಸಂದರ್ಭಗಳು.
ಅಸಲಿಗೆ ಯಾಕೆ ಇಂತಹ ಭಯಗಳು ನಮ್ಮನ್ನು ಕಾಡುತ್ತವೆ ಎನ್ನುವುದನ್ನು ನೋಡೋಣ, ತುಂಬ ಸಲ ನಾವು ಯಾರೋ ಒಬ್ಬರು ಒಂದು ದೆವ್ವದ ಕಥೆ ಹೇಳಿದರೆ ಇರುವಲ್ಲಿಯೇ ನಮ್ಮ ದೇಹ ಕಂಪಿಸುತ್ತಿರುತ್ತದೆ, ರಾತ್ರಿ ಲೈಟ್ ಆಫ್ ಮಾಡಿ ಹಾಸಿಗೆಯ ಮೇಲೆ ಬಿದ್ದ ತಕ್ಷಣ ದೆವ್ವದ ಕಥೆ ನೆನಪಾಗುತ್ತದೆ, ಇವೆಲ್ಲವೂ ಕೂಡ ನಮ್ಮ ದ್ವಂಧ್ವ ಮನಸ್ಸಿನ ಸಂಕೇತ. ಒಬ್ಬರು ಒಂದು ವಿಚಾರ ಹೇಳಿದ ತಕ್ಷಣ ನಮ್ಮದೇ ಆದ ಕಲ್ಪನಾ ಲೋಕಕ್ಕೆ ಹೋಗಿ, ಒಂದು ಚಿತ್ರಣವನ್ನು ಕಲ್ಪಿಸಿಕೊಂಡು ಅದನ್ನು ಪ್ರತಿನಿತ್ಯ ಮನಸ್ಸಿನಲ್ಲೆ ರೀಕಾಲ್ ಮಾಡಿಕೊಳ್ಳುತ್ತಿರುತ್ತೇವೆ, ಅದಕ್ಕೆ ನಮ್ಮದೂ ಒಂದಷ್ಟು ಚಿತ್ರಕಥೆ, ಸಂಭಾಷಣೆ, ಸನ್ನಿವೇಷ ಸೇರಿಸಿಕೊಂಡು ದೊಡ್ಡದು ಮಾಡಿಬಿಟ್ಟಿರುತ್ತೇವೆ, ಅದರ ಪ್ರಭಾವ ನಮ್ಮ ಮನಸ್ಸಿನ ಮೇಲೆ ಪದೇ ಪದೇ ಆಗುತ್ತಿರುತ್ತದೆ. ಈ ರೀತಿಯ ಫೋಬಿಯಾ ಹೆಚ್ಚಾಗಿ ‘ಖಾಲಿ’ ಕೂತಿರುವಾಗ ಮಾತ್ರ ಕಾಡುತ್ತದೆ. ಅದಕ್ಕೆ ಹೇಳುವುದು ‘Idle Mind is Devils Workshop’ ಅಂತ.
ಇನ್ನು ಒಂದು ವಿಚಾರವನ್ನು ನಾವು ಯೋಚಿಸಬೇಕಿದೆ, ಬೆಕ್ಕು ಅಪಶಕುನ ಎನ್ನುವ, ನರಿ ಶುಭಶಕುನ ಎನ್ನುವ ನಾವುಗಳು ಮನೆಯಲ್ಲಿ ಬೆಕ್ಕನ್ನು ಸಾಕುತ್ತೇವೆಯೇ ಹೊರತು ನರಿಯನ್ನಲ್ಲ. ಹಾಗೆಯೇ ಯಾವುದೇ ಕೆಲಸವಾಗಲಿ ಸಮಚಿತ್ತದಿಂದ, ಪರಿಶ್ರಮದಿಂದ, ಶ್ರದ್ಧೆಯಿಂದ ಮಾಡಿದರೇ ಫಲ ಸಿಕ್ಕೇ ಸಿಗುತ್ತದೆ. ಫಲ ಸಿಗಬೇಕಾದರೆ ತುಂಬಿದ ಕೊಡ ಅಡ್ಡ ಬರಲೇಬೇಕು ಎಂಬ ನಿಯಮವಿಲ್ಲ, ಇನ್ನು ಕುಂಕುಮ ಹಚ್ಚುವಾಗ ಕೈಜಾರಿದರೆ, ಅದು ಕೇವಲ ನಮ್ಮ ಮೈಮರೆವೇ ಹೊರತು ಪ್ರಳಯಕ್ಕೆ ಮುನ್ನುಡಿಯಲ್ಲ ಎನ್ನುವ ಅನೇಕ ವಿಚಾರಗಳನ್ನು ನಾವು ಮನಗಾಣಬೇಕಿದೆ. ಇನ್ನು ಬೆಳಗ್ಗೆ ಬಲಗಡೆ ಏಳಬೇಕು ಎನ್ನಲು ನಮ್ಮ ನಂಬಿಕೆಗಿಂತ ವೈಜ್ಣಾನಿಕ ಕಾರಣವಿದೆ ಎನ್ನುವುದು ಕೂಡ ನಾವು ಮರೆಯಬಾರದು.
ಎಲ್ಲಿಯವರೆಗೆ ನಮ್ಮಲ್ಲಿ ಭಯ, ಆತಂಕ, ಅಪರಾಧಿ ಮನೋಭಾವ, ಪದೇ ಪದೇ ತಪ್ಪು ಮಾಡುವ ಮನಸ್ಥಿತಿ ಕಾಡುತ್ತಿರುತ್ತದೆಯೋ ಅಲ್ಲಿಯವರೆಗೂ ಈ ರೀತಿಯ ‘ಶಕುನ’ಗಳು ನಮ್ಮನ್ನು ಆವರಿಸಿಕೊಂಡಿರುತ್ತವೆ, ಒಮ್ಮೆ ಅವನ್ನೆಲ್ಲ ಸರಿಸಿ ಮುಕ್ತ, ನಿರ್ಭೀತ ಹಾಗು ಧೃಢ ಮನಸ್ಥಿತಿಯೊಂದಿಗೆ ನಾವು ದಿನವನ್ನು ಆರಂಭಿಸಿದ್ದೇ ಆದರೆ, ಶಕುನಗಳನ್ನು ಹೊರತುಪಡಿಸಿದ, ಖುಷಿಯ ಮನಸ್ಥಿತಿಯ ದಿನ ಖಂಡಿತಾ ನಮ್ಮದಾಗುತ್ತದೆ.
ಏನಂತೀರಿ?
-ಹೆಚ್. ಆರ್. ಪ್ರಭಾಕರ್
No comments:
Post a Comment