Pages

Saturday, December 6, 2014

ಬಾಳಿನ ‘ಘಟನೆಗಳು’ ಕಾಡುವ ‘ಶಕುನಗಳು’


ಬೆಳಿಗ್ಗೆ ಎದ್ದಾಗಿನಿಂದ ಯಾಕೋ ಮನಸ್ಸೇ ಸರಿ ಇಲ್ಲ, ಏನೋ ಬೇಸರ, ಭಯ, ಆತಂಕ, ದ್ವಂಧ್ವ, ಏನು ಕೆಲಸ ಮಾಡಲು ಮನಸ್ಸಿಲ್ಲ, ಕೆಲಸ ಮಾಡಿದರೂ ಎಲ್ಲಿ ತಪ್ಪು ಮಾಡಿಬಿಡುತ್ತೇವೋ ಎನ್ನುವ ಆತಂಕ, ಏನು ಮಾಡಬೇಕೆಂದು ತೋಚುತ್ತಿಲ್ಲ, ಇತ್ತೀಚೆಗೆ ಯಾಕೋ ಪದೇ ಪದೇ ಹೀಗೆ ಆಗುತ್ತಿರುತ್ತದೆ, ಕಾರಣ ಗೊತ್ತಾಗುತ್ತಿಲ್ಲ, ಬೆಳಗ್ಗೆ ಎದ್ದ ತಕ್ಷಣ ಮನೆಯಲ್ಲಿ ಜಗಳವಾಯ್ತು, ಯಾಕೋ ಶಕುನವೇ ಸರಿ ಇಲ್ಲ, ಒಂದು ರೀತಿ ಮನಸ್ಸಿಗೆ ಮಂಕು ಕವಿದಿದೆ, ಎಂದು ಕೆಲವೊಮ್ಮೆ ಮನಸ್ಸಿಗೆ ಅನ್ನಿಸಿ ಮಂಕಾಗಿ ಕುಳಿತಿರುತ್ತೇವೆ ಅಲ್ಲವೆ?
ಇದು ಕೆಲವೊಮ್ಮೆ ಬೆಳ್ಳಂಬೆಳಿಗ್ಗೆಯೇ ಶುರುವಾಗಿ ಇಡೀ ದಿನ ಕಾಡುತ್ತಿರುತ್ತದೆ. ಒಂದು ರೀತಿಯ ‘ಮಾರ್ನಿಂಗ್ ಫೋಬಿಯಾ! ರಾತ್ರಿ ಬಿದ್ದ ಯಾವುದೋ ನಮಗೆ ಸಂಬಂಧವಿಲ್ಲದ ಕನಸು, ಬೆಳಗಿನಜಾವದ ಕೆಟ್ಟ ಕನಸು, ರಾತ್ರಿ ಟೀವಿಯಲ್ಲಿ  ನೋಡಿದ ಕ್ರೈಂ ಕಾರ್ಯಕ್ರಮದ ಪರಿಣಾಮ, ಬೆಳಗ್ಗೆ ಎದ್ದು ಹೊರಹೋದ ತಕ್ಷಣ ಕಂಡ ಎದುರು ಮನೆಯ ಬೆಕ್ಕು, ಅಥವಾ ಹಾಸಿಗೆಯಿಂದ ಏಳುವಾಗ ಎಡಗಡೆ ಎದ್ದದ್ದು, ಬೆಳಗ್ಗೆ ಎದ್ದ ಕೂಡಲೇ ಮೊಬೈಲಿಗೆ ಬಂದ ಯಾವುದೋ ಸಾವಿನ ಸುದ್ದಿ, ತುಂಬಾ ಸಮಯ ಮಲಗಿಬಿಟ್ಟೆ ಎಂದು ತಡಬಡಾಯಿಸಿ ಎದ್ದು ಕೂರುವ ಪರಿ, ಹೀಗೆ ಅನೇಕ ವಿಚಾರಗಳು ನಾವು ಎಷ್ಟೆ ಗಟ್ಟಿಗರೆಂದುಕೊಂಡರು ನಮ್ಮ ಮನಸ್ಸನ್ನು ಕೆಲವೊಮ್ಮೆ ಆತಂಕಕ್ಕೆ ದೂಡಿಬಿಡುತ್ತವೆ. ಬೆಳಗ್ಗೆ ಹಾಲು ತರಲು ಹೊರ ಹೋದಾಗ ಬೆಕ್ಕು ಅಡ್ಡ ಬಂತು ಎನ್ನುವ ವಿಚಾರ ನಮಗೆ ಗೌಣ ಎನಿಸಿದರೂ, ನಾವು ಅದನ್ನು ನಂಬುವುದಿಲ್ಲ ಎಂದು ಮನದಲ್ಲಿ ಅಂದು ಕೊಂಡರೂ ಒಂದು ದಿನ ನನಗೆ ಬೆಕ್ಕು ಅಡ್ಡ ಬಂದಿದ್ದರಿಂದ ನನಗೆ ಅಪಘಾತವಾಗಿತ್ತು ಗೊತ್ತಾ? ಎಂದು ಯಾರೋ ಹೇಳಿರುವ ‘ಒಂದು ಬೆಕ್ಕಿನ ಕಥೆ’ ನಮ್ಮನ್ನು ಒಂದು ಕ್ಷಣ ನಿಂತು ನಡೆಯುವಂತೆ ಮಾಡಿಬಿಡುತ್ತದೆ.
ಶಕುನ ಎನ್ನುವ ಈ ಪದ ಶುಭ ಮತ್ತು ಅಶುಭ ಎನ್ನುವ ಎರಡು ಭಾಗಗಳಾಗಿ ನಮ್ಮ ಕಿವಿಯಲ್ಲಿ ರಿಂಗಣಿಸುತ್ತಲೇ ಇರುತ್ತದೆ. ನಮ್ಮನ್ನು ಕಾಡುತ್ತಲೇ ಇರುತ್ತದೆ! ಅಶುಭ ಶಕುನಗಳು ಎಂದು ಪರಿಭಾವಿಸಿರುವ ಕೆಲವು ಉದಾಹರಣೆಗಳನ್ನು ಚರ್ಚಿಸುವುದಾದರೆ, ಒಳ್ಳೆಯ ಕಾರ್ಯಕ್ಕೆ ಹೊರಟಾಗ ಖಾಲಿ ಕೊಡ ಅಡ್ಡ ಬಂದರೆ, ಸೌದೆ ಅಡ್ಡ ಬಂದರೆ, ಬೆಕ್ಕು ಅಡ್ಡ ಬಂದರೆ, ಏನಾದರು ವಿಚಾರ ಮಾತನಾಡುವಾಗ ಒಂಟಿ ಸೀನು ಬಂದರೆ, ಮನೆಯಿಂದ ಹೊರಗೆ ಕಾಲಿಡುವಾಗ ಎಡವಿದರೆ, ಗಂಡಸರಿಗೆ ದೇಹದ ಎಡಭಾಗ, ಹೆಂಗಸರಿಗೆ ದೇಹದ ಬಲಭಾಗ ಅದುರಿದರೆ, ಮನೆಯಲ್ಲಿ ಕುಂಕುಮ ಅಕಸ್ಮಾತಾಗಿ ಚೆಲ್ಲಿಬಿಟ್ಟರೆ, ಒಂಟಿ ಕತ್ತೆ ಕಂಡು ಬಿಟ್ಟರೆ, ಕಾಗೆ ಮೈಗೆ ತಾಗಿಬಿಟ್ಟರೆ, ಹೀಗೆ ಅನೇಕ ನಂಬಿಕೆಗಳು ನಮಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿರುತ್ತವೆ. ಅವು ಮೂಢ ನಂಬಿಕೆಗಳಾ? ನಮ್ಮ ದುರ್ಬಲ ಮನಸ್ಥಿತಿಯ ಸಂಕೇತವಾ? ನಾವು ಕೇಳಿದ ಅಂತೆ-ಕಂತೆ ಕಥೆಗಳ ಪ್ರಭಾವವಾ? ಯೋಚಿಸಬೇಕಿದೆ.
ಇನ್ನು ಶುಭ ಶಕುನಗಳ ಬಗ್ಗೆ ಚರ್ಚಿಸುವುದಾದರೆ ಸುಮಂಗಲಿಯರು ಎದುರು ಸಿಕ್ಕರೆ, ನರಿ ಕಂಡರೆ, ತುಂಬಿದ ಕೊಡ ಎದುರಿಗೆ ಸಿಕ್ಕರೆ,  ಹೀಗೆ ಬೆಳೆಯುತ್ತಾ ಹೋಗುತ್ತದೆ ಪಟ್ಟಿ. ಈ ರೀತಿಯ ಶುಭ ಶಕುನಗಳು ಬೆಳಗ್ಗೆ ಎದ್ದ ತಕ್ಷಣ ಅನೇಕರ ಮನಸ್ಸಿಗೆ ಪ್ರಫುಲ್ಲತೆ ಕೊಟ್ಟರೆ, ಅಶುಭ ಶಕುನಗಳು ಮನಸ್ಸಿಗೆ ಘಾಸಿ ಮಾಡಿ ಇಡೀ ದಿನದ ನೆಮ್ಮದಿಯನ್ನು ಕೆಡಿಸುವಂತಹದು.
ಇಂತಹ ಸಂದರ್ಭದಲ್ಲಿ ನಾವು ಯೋಚಿಸಬೇಕಿರುವುದು, ಊರಿನ ಮಧ್ಯೆ ಬದುಕುತ್ತಿರುವ, ವಾಸಿಸುತ್ತಿರುವ ನಮಗೆ ಬೆಳಗ್ಗೆ ಎದ್ದು ಹೊರ ಹೋದಾಗ ಬೆಕ್ಕು ಕಾಣಿಸದೆ ಹುಲಿ ಸಿಂಹಗಳು ಕಾಣಿಸಲು ಸಾಧ್ಯವೆ? ಎಂದು.  ಊರು ಅಂದ ಮೇಲೆ ಜನ ಓಡಾಡುವುದು ಸಹಜ, ನೀರಿಗಾಗಿ ಖಾಲಿ, ಭರ್ತಿ ಕೊಡ ಹೊತ್ತೊಯ್ಯುವುದು ಕೂಡ ಮಾಮೂಲು, ರಸ್ತೆ ಅಂದ ಮೇಲೆ ಅಲ್ಲಿ ಎಲ್ಲ ರೀತಿಯ ಮಂದಿ ಓಡಾಡುತ್ತಾರೆ, ಬೆಳಿಗ್ಗೆ ಒಲೆ ಹಚ್ಚಲು ಸೌದೆ ಇಲ್ಲದಿದ್ದರೆ ಅದನ್ನು ಕೊಂಡೊಯ್ಯಲೇ ಬೇಕು, ಕುಂಕುಮ ಹಚ್ಚುವಾಗ ಕೈ ಜಾರುತ್ತದೆ, ಮನುಷ್ಯ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು, ದೇಹದಲ್ಲಿ ವಾಯು ಜಾಸ್ತಿಯಾದರೆ ಬಲವೋ? ಎಡವೋ? ಯಾವದೋ ಒಂದು ಭಾಗ ಅದುರುತ್ತದೆ, ಶೀತವದಾಗ ಒಂಟಿಯೋ, ಜಂಟಿಯೋ ಸೀನು ಬರುತ್ತದೆ, ನಡೆಯುವವರು ಎಡವುವುದು ಸಹಜ?  ಅದಕ್ಕೆ ಶುಭ, ಅಶುಭ ಎನ್ನುವ ‘ಶಕುನ’ದ ಟ್ಯಾಗ್ ಅಂಟಿಸಿ ನಮ್ಮ ಮನಸ್ಸಿನ ನೆಮ್ಮದಿ ಹಾಳುಮಾಡಿಕೊಂಡು ಇಡೀ ದಿನ ಒದ್ದಾಡುವುದು ಎಷ್ಟು ಸರಿ?
ಇದು ನಾವು ಬೆಳೆದ ಪರಿಸರ, ಸಮಾಜ, ಭಯಗ್ರಸ್ಥ ಜನರ ಸಂಗ, ನಮ್ಮ ಕುಟುಂಬದ ಹಿನ್ನೆಲೆ, ನಾವು ಕೇಳಿದ ಕಥೆಗಳು, ಯಾರೋ ಬೆದರಿದ ಮಂದಿ ಅವರ ತಲೆಯಲ್ಲಿನ ಒತ್ತಡವನ್ನು ನಮ್ಮ ತಲೆಗೆ ವರ್ಗಾಯಿಸಿದ ಸಂದರ್ಭ, ಊಹಾಪೋಹದ ಕಥೆಗಳು ಇವೆಲ್ಲವೂ ಸೇರಿ ನಮ್ಮನ್ನು ಮತ್ತಷ್ಡು ಅಧೀರರನ್ನಾಗಿಸುತ್ತವೆ. ಇವು ಭಯ ಪಟ್ಟ ವ್ಯಕ್ತಿಯ ಮೇಲೆ ಹಗ್ಗ ಎಸೆದರೂ ಹಾವೆಂದು ಭ್ರಮಿಸುತ್ತಾರಲ್ಲ ಆ ರೀತಿಯ ಸಂದರ್ಭಗಳು.
ಅಸಲಿಗೆ ಯಾಕೆ ಇಂತಹ ಭಯಗಳು ನಮ್ಮನ್ನು ಕಾಡುತ್ತವೆ ಎನ್ನುವುದನ್ನು ನೋಡೋಣ, ತುಂಬ ಸಲ ನಾವು ಯಾರೋ ಒಬ್ಬರು ಒಂದು ದೆವ್ವದ ಕಥೆ ಹೇಳಿದರೆ ಇರುವಲ್ಲಿಯೇ ನಮ್ಮ ದೇಹ ಕಂಪಿಸುತ್ತಿರುತ್ತದೆ, ರಾತ್ರಿ ಲೈಟ್ ಆಫ್ ಮಾಡಿ ಹಾಸಿಗೆಯ ಮೇಲೆ ಬಿದ್ದ  ತಕ್ಷಣ ದೆವ್ವದ ಕಥೆ ನೆನಪಾಗುತ್ತದೆ, ಇವೆಲ್ಲವೂ ಕೂಡ ನಮ್ಮ ದ್ವಂಧ್ವ ಮನಸ್ಸಿನ ಸಂಕೇತ. ಒಬ್ಬರು ಒಂದು ವಿಚಾರ ಹೇಳಿದ ತಕ್ಷಣ ನಮ್ಮದೇ ಆದ ಕಲ್ಪನಾ ಲೋಕಕ್ಕೆ ಹೋಗಿ, ಒಂದು ಚಿತ್ರಣವನ್ನು ಕಲ್ಪಿಸಿಕೊಂಡು ಅದನ್ನು ಪ್ರತಿನಿತ್ಯ ಮನಸ್ಸಿನಲ್ಲೆ ರೀಕಾಲ್ ಮಾಡಿಕೊಳ್ಳುತ್ತಿರುತ್ತೇವೆ, ಅದಕ್ಕೆ ನಮ್ಮದೂ ಒಂದಷ್ಟು ಚಿತ್ರಕಥೆ, ಸಂಭಾಷಣೆ, ಸನ್ನಿವೇಷ ಸೇರಿಸಿಕೊಂಡು ದೊಡ್ಡದು ಮಾಡಿಬಿಟ್ಟಿರುತ್ತೇವೆ, ಅದರ ಪ್ರಭಾವ ನಮ್ಮ ಮನಸ್ಸಿನ ಮೇಲೆ ಪದೇ ಪದೇ ಆಗುತ್ತಿರುತ್ತದೆ. ಈ ರೀತಿಯ ಫೋಬಿಯಾ ಹೆಚ್ಚಾಗಿ ‘ಖಾಲಿ’ ಕೂತಿರುವಾಗ ಮಾತ್ರ ಕಾಡುತ್ತದೆ. ಅದಕ್ಕೆ ಹೇಳುವುದು ‘Idle Mind is Devils Workshop’ ಅಂತ.
ಇನ್ನು ಒಂದು ವಿಚಾರವನ್ನು ನಾವು ಯೋಚಿಸಬೇಕಿದೆ, ಬೆಕ್ಕು ಅಪಶಕುನ ಎನ್ನುವ, ನರಿ ಶುಭಶಕುನ ಎನ್ನುವ ನಾವುಗಳು ಮನೆಯಲ್ಲಿ ಬೆಕ್ಕನ್ನು ಸಾಕುತ್ತೇವೆಯೇ ಹೊರತು ನರಿಯನ್ನಲ್ಲ. ಹಾಗೆಯೇ ಯಾವುದೇ ಕೆಲಸವಾಗಲಿ ಸಮಚಿತ್ತದಿಂದ, ಪರಿಶ್ರಮದಿಂದ, ಶ್ರದ್ಧೆಯಿಂದ ಮಾಡಿದರೇ ಫಲ ಸಿಕ್ಕೇ ಸಿಗುತ್ತದೆ. ಫಲ ಸಿಗಬೇಕಾದರೆ ತುಂಬಿದ ಕೊಡ ಅಡ್ಡ ಬರಲೇಬೇಕು ಎಂಬ ನಿಯಮವಿಲ್ಲ, ಇನ್ನು ಕುಂಕುಮ ಹಚ್ಚುವಾಗ ಕೈಜಾರಿದರೆ, ಅದು ಕೇವಲ ನಮ್ಮ ಮೈಮರೆವೇ ಹೊರತು ಪ್ರಳಯಕ್ಕೆ ಮುನ್ನುಡಿಯಲ್ಲ ಎನ್ನುವ ಅನೇಕ ವಿಚಾರಗಳನ್ನು ನಾವು ಮನಗಾಣಬೇಕಿದೆ. ಇನ್ನು ಬೆಳಗ್ಗೆ ಬಲಗಡೆ ಏಳಬೇಕು ಎನ್ನಲು ನಮ್ಮ ನಂಬಿಕೆಗಿಂತ ವೈಜ್ಣಾನಿಕ ಕಾರಣವಿದೆ ಎನ್ನುವುದು ಕೂಡ ನಾವು ಮರೆಯಬಾರದು.
ಎಲ್ಲಿಯವರೆಗೆ ನಮ್ಮಲ್ಲಿ ಭಯ, ಆತಂಕ, ಅಪರಾಧಿ ಮನೋಭಾವ, ಪದೇ ಪದೇ ತಪ್ಪು ಮಾಡುವ ಮನಸ್ಥಿತಿ ಕಾಡುತ್ತಿರುತ್ತದೆಯೋ ಅಲ್ಲಿಯವರೆಗೂ ಈ ರೀತಿಯ ‘ಶಕುನ’ಗಳು ನಮ್ಮನ್ನು ಆವರಿಸಿಕೊಂಡಿರುತ್ತವೆ, ಒಮ್ಮೆ ಅವನ್ನೆಲ್ಲ ಸರಿಸಿ ಮುಕ್ತ, ನಿರ್ಭೀತ ಹಾಗು ಧೃಢ ಮನಸ್ಥಿತಿಯೊಂದಿಗೆ ನಾವು ದಿನವನ್ನು ಆರಂಭಿಸಿದ್ದೇ ಆದರೆ, ಶಕುನಗಳನ್ನು ಹೊರತುಪಡಿಸಿದ, ಖುಷಿಯ ಮನಸ್ಥಿತಿಯ ದಿನ ಖಂಡಿತಾ ನಮ್ಮದಾಗುತ್ತದೆ.
ಏನಂತೀರಿ?
-ಹೆಚ್. ಆರ್. ಪ್ರಭಾಕರ್

‘ಹೊಟ್ಟೆಕಿಚ್ಚು’ ಎನ್ನುವ ‘ಮೊಟ್ಟೆಕೋಳಿ’


ಮನುಷ್ಯ ಭೂಮಿಗೆ ಬಂದಾಗಿನಿಂದ ಕೊನೆಯ ಘಳಿಗೆಯವರೆಗೆ ಬದುಕಿನ ವಿವಿಧ ಘಟ್ಟಗಳಲ್ಲಿ, ಹಲವರನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಕಾಡುವ, ಕೆಲವರು ಬದುಕು ಪೂರಾ ಹಾಸು ಹೊದ್ದು ಮಲಗಿರುವ ಭಾವ ಈ ಹೊಟ್ಟೆಕಿಚ್ಚು. ಮೊದಲು ನನಗೆ ಬೇಕು ಎಂಬ ಸಣ್ಣ ಸ್ವಾರ್ಥ, ನನ್ನನ್ನೇ ಗಮನಿಸಲಿ ಎಂಬ ನಿರೀಕ್ಷೆ, ನಾನೆ ಪ್ರಮುಖನಾಗಬೇಕೆಂಬ ಹಂಬಲ ಅಥವಾ ನಮಗಿಲ್ಲದ್ದು ಅವರಿಗೇಕೆ ಸಿಕ್ಕಿತೆಂಬ ಅಸಹನೆ, ಅವರು ಅದಕ್ಕೆ ಅರ್ಹರಲ್ಲ ಆದರೂ ಅವರಿಗೆ ಆ ಮನ್ನಣೆ ದಕ್ಕಬಾರದಿತ್ತು ಎಂಬ ಚಿಂತನೆ, ನನಗಿಲ್ಲದ್ದು ಅವರಿಗೇಕೆ? ಎಂಬ ಅಹಂ ಹೀಗೆ ಕಾಡುತ್ತ ಅದು ಹೆಚ್ಚಾದಾಗ ನಮ್ಮ ವ್ಯಕ್ತಿತ್ವದಲ್ಲಿ ವ್ರಣವಾಗಿ ಕಾಡುತ್ತದೆ. ಹೊಟ್ಟೆಕಿಚ್ಚು ಎನ್ನುವುದು ನಮ್ಮಲ್ಲಿ ಛಲ ಹುಟ್ಟಿಸುವ ಕಿಚ್ಚಾಗಬೇಕೇ ವಿನಃ ನಮ್ಮ ವ್ಯಕ್ತಿತ್ವವನ್ನು ಸುಡುವ ಕಿಚ್ಚಾಗಬಾರದು ಅಲ್ಲವೆ?
ಇದು ಮನುಷ್ಯನ ಸಹಜ ಗುಣ ಎಂದು ಮೇಲ್ನೋಟಕ್ಕೆ ಹೇಳಬಹುದಾದರೂ ಅಳತೆ ಮೀರಿದರೆ ಸಹ್ಯವಲ್ಲ ಹಾಗು ಆರೋಗ್ಯಕರವೂ ಅಲ್ಲ! ಇದು ಮನುಷ್ಯನ ಲೊಲುಪತನದ, ಲಂಪಟತನದ ಹಾಗು ಮತ್ತೊಬ್ಬರ ಏಳ್ಗೆ, ಯಶಸ್ಸು ಹಾಗು ಉದ್ಧಾರವನ್ನು ಸಹಿಸದ ಮಂದಿಯ ಮನಸ್ಥಿತಿಯ ಪರಮಾವಧಿಯೇ ಸರಿ!  ಇದು ಎಲ್ಲ ಕಾಲಕ್ಕೂ, ಎಲ್ಲರಲ್ಲೂ ಇರುತ್ತದೆ ಎಂದು ಹೇಳಲು ಬಾರದು, ಕೆಲವರು ಇದಕ್ಕೆ ತದ್ವಿರುಧ್ಧವಾಗಿ, ತಟಸ್ಥವಾಗಿ ತಮ್ಮ ಪಾಡಿಗೆ ತಾವು ಬದುಕುತ್ತಿರುತ್ತಾರೆ ಆದರೆ ಇವರ ಸಂಖ್ಯೆ ತುಂಬಾ ಕಡಿಮೆ. ನಾನು ಹೇಳಲು ಹೊರಟದ್ದು ‘ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ’ ಎಂದು ಕರೆಯಿಸಿಕೊಳ್ಳುವ, ಅಥವಾ ಅವರ ಹಾವ-ಭಾವ, ಮಾತು-ನಡೆ ಕೊಂಕು ನುಡಿ-ವ್ಯಕ್ತಿತ್ವ ಹೀಗೆ ನೋಡಿದ ತಕ್ಷಣ ಎಂತಹವರಿಗೂ ಅನ್ನಿಸಿಬಿಡುತ್ತದಲ್ಲ ಹೌದು ಇವರು ಇತರರ ಏಳ್ಗೆ ಸಹಿಸುವುದಿಲ್ಲ ಎಂದು, ಅಂತಹವರ ಬಗ್ಗೆ!
ಇಂತಹ ಮನಸ್ಥಿತಿಯವರು, ಮೊಸರಲ್ಲಿ ಕಲ್ಲು ಹುಡುಕುವ ಹುಕಿ ಇರುವವರು, ಇವರಿಗೆ ಯಾರು ಏನೇ ಸಾಧಿಸಿದರೂ, ಮುಂದಡಿ ಇಟ್ಟರೂ ಅನುಮಾನ ಮತ್ತು ಅಸಹನೆಯಿಂದ ನೋಡುತ್ತಿರುತ್ತಾರೆ. ಅದು ವಿದ್ಯೆ, ಉದ್ಯೋಗ, ವ್ಯಾಪಾರ, ಹಣ, ಅಂತಸ್ತು, ಸಾಮಾಜಿಕ ಸ್ಥಾನಮಾನ, ಬುದ್ಧಿಮತ್ತೆ, ಧೈರ್ಯ, ಸಾಹಸೀ ಪ್ರವೃತ್ತಿ, ಒಳ್ಳೆಯ ಗಂಡ/ ಹೆಂಡತಿ ಸಿಕ್ಕಾಗ, ಬುಧ್ಧಿವಂತ ಮಕ್ಕಳು ಹುಟ್ಟಿದಾಗ, ನಮ್ಮ ಮಕ್ಕಳು ಸಾಧಿಸದ್ದನ್ನು ಇತರರ ಮಕ್ಕಳು ಸಾಧಿಸಿದಾಗ,  ಒಟ್ಟಾರೆ ಹೇಳುವುದಾದರೆ ನಾನು ಯಾವ ಸ್ಥಿತಿಯಲ್ಲಿ ಇದ್ದೇನೋ ನನ್ನ ಓರಗೆಯವರೂ ಅದೇ ಸ್ಥಿತಿಯಲ್ಲಿ ಇರಬೇಕು ಎಂದು ಬಯಸುವವರು ಹಾಗು ತಮ್ಮ ಓರಗೆಯವರು ಒಂದು ಹೆಜ್ಜೆ ಮುಂದಿದ್ದಾರೆ ಎಂದ ತಕ್ಷಣ ಇವರು ಇರುವಲ್ಲಿಯೇ ವಿಲವಿಲ ಒದ್ದಾಡಲು ಶುರುಮಾಡುತ್ತಾರೆ, ಅಸಹನೆಯ ಕೂಪದಲ್ಲಿ ಬೀಳುತ್ತಾರೆ, ಅಂದಿನಿಂದ ಇವರ ಕಾಯಕ ಒಂದೇ ಆಗುತ್ತದೆ ಅದು ಮುನ್ನುಗ್ಗುದವರ ಸಾಧನೆಯನ್ನು ಹೀಗೆಳೆದು, ಅಪಪ್ರಚಾರ ಮಾಡಿ ಹೇಗಾದರು ಮಾಡಿ ಅವರ ಬೆಳವಣಿಗೆಯನ್ನು ಕುಂಠಿತಗೊಳಿಸಬೇಕು ಎಂಬುದಾಗುತ್ತದೆ! ಇದು ಎಲ್ಲಿಯವರೆಗೂ ಹೋಗುತ್ತದೆ ಎಂದರೆ, ನನ್ನ ಒಂದು ಕಣ್ಣು ಹೋದರೂ ಚಿಂತೆಯಿಲ್ಲ ಅವರ ಎರಡೂ ಕಣ್ಣು ಹೋಗಲಿ ಅದೇ ನನಗೆ ಸಮಾಧಾನ ಎನ್ನುವ ಕಥೆ ಕೇಳಿದ್ದೀರಲ್ಲ, ಅಂತಹ ಹಂತದವರೆಗೆ ಕೊಂಡೊಯ್ದುಬಿಡುತ್ತದೆ ಇದು ನಿಜಕ್ಕೂ ಅಪಾಯಕಾರಿ!
ತುಂಬಾ ಸಲ ಬದುಕಲ್ಲಿ ನಿದ್ದೆಕೆಟ್ಟು, ಶ್ರಮಪಟ್ಟು, ವಿಶ್ರಾಂತಿಯಿಲ್ಲದೆ ದುಡಿದು, ವಯಕ್ತಿಕ ಬದುಕನ್ನು ಬದಿಗಿಟ್ಟು ಸಾಧಿಸಲು ಹೊರಟವರಿಗೆ ಇಂತಹ ಮಂದಿ ತಣ್ಣೀರೆರೆಚುವ ಕೆಲಸ ಮಾಡಿಬಿಡುತ್ತಾರೆ. ಇವರು ಒಂದು ರೀತಿ ಹೊಂಚು ಹಾಕಿ ಸಂಚು ಮಾಡುವವರು.  ತಟಸ್ಥವಾಗಿ ತಮ್ಮ ಋಣಾತ್ಮಕ ಮಾತಿನ, ನಡವಳಿಕೆಯ ಮೂಲಕ ಸಾಧಿಸುವವರ ಗುರಿ ತಪ್ಪುವಂತೆ ಮಾಡಿಬಿಡುವ ಚಾಕಚಕ್ಯತೆ ಇವರಿಗೆ ಒಲಿದುಬಿಟ್ಟಿರುತ್ತದೆ.
ಇಂತಹವರ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದನ್ನು ಚರ್ಚಿಸುವುದಾದರೆ, ಇವರು ನಾಟಕೀಯತೆ ಮೈಗೂಡಿಸಿಕೊಂಡಿರುತ್ತಾರೆ, ಮಾತು ತುಂಬಾ ನಯವಾಗಿರುತ್ತದೆ, ಅತಿ ವಿನಯವಂತಿಕೆ ತೋರ್ಪಡಿಸುತ್ತಾರೆ, ತಕ್ಷಣಕ್ಕೆ ನಿಮ್ಮ ಮಾತಿಗೆ ಸ್ಪಂದಿಸದೆ ಅಳೆದೂ ತೂಗಿ ಮಾತನಾಡುತ್ತಾರೆ, ಪ್ರತಿ ನಡೆ ನುಡಿಯಲ್ಲೂ ಕೂಡ ನಿಮ್ಮ ಸಿಂಪತಿ ಗಿಟ್ಟಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ, ನಿಮ್ಮ ಎದುರಿಗೆ ಇತರರನ್ನು ದೂರುತ್ತಾ ನಿಮಗೆ ಖುಷಿಪಡಿಸಲು ವೃಥಾ ಪ್ರಯತ್ನಿಸುತ್ತಾರೆ, ಹಾಗು ನಿಮ್ಮ ಪ್ರತಿ ಬೆಳವಣಿಗೆಯನ್ನೂ ಕೆಟ್ಟ ಕುತೂಹಲದಿಂದ ಗಮನಿಸಿ ತಮ್ಮ ಅಭಿಪ್ರಾಯವನ್ನು ಪರೋಕ್ಷವಾಗಿ ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿರುತ್ತಾರೆ ಹಾಗು ನಿಮ್ಮ ಎದುರಿಗೆ ಮಾತ್ರ ನೀವು ಏನೇ ಮಾಡಿದರೂ ಸರೀ ಎಂದು ಹೊಗಳುತ್ತಾರೆ! ಅಪ್ಪಿ ತಪ್ಪಿ ನೀವೆಲ್ಲಾದರೂ ನಿಮ್ಮ ಕಾರ್ಯದಲ್ಲಿ ಎಡವಿ ಮನಸ್ಸಿಗೆ ನೋವಾದರೆ ಆ ನೋವನ್ನು ನಿಮಗೆ ಅರಿವಿಲ್ಲದಂತೆಯೇ ಇಮ್ಮಡಿಗೊಳಿಸುತ್ತಾರೆ, ಆದರೆ ವಿಪರ್ಯಾಸ ಎಂದರೆ ತುಂಬಾ ಸಲ ನಾವಿದನ್ನು ಗಮನಿಸುವ ಗೋಜಿಗೇ ಹೋಗಿರುವುದಿಲ್ಲ. ಆದರೆ ನೆನಪಿರಲಿ ಇವನ್ನೆಲ್ಲ ಮಾಡುವವರು ಹೊರಗಿನವರಲ್ಲ, ಕೇವಲ ನಿಮ್ಮ ಅಕ್ಕ ಪಕ್ಕದವರು, ಸಹೋದ್ಯೋಗಿಗಳೂ , ಅಥವಾ ನಿಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡ ನೀವು ಅವರನ್ನು ಆಪ್ತರು ಎಂದು ನಂಬಿದ ಹಿತಶತ್ರುಗಳು
ಇಂತಹ ವಾಸನೆ ನಿಮ್ಮ ಮೂಗಿಗೆ ಬಡಿಯಿತೋ ತಕ್ಷಣಕ್ಕೆ ಎಚ್ಚೆತ್ತುಕೊಳ್ಳವುದು ಎಲ್ಲ ರೀತಿಯಿಂದಲೂ ಕ್ಷೇಮ, ಕಾರಣ ನೀವು ತುಂಬಾ ಆಳಕ್ಕೆ ನಂಬಿದ ಒಬ್ಬ ಗೆಳೆಯನೋ, ಗೆಳತಿಯೋ, ಬಂಧುವೋ, ಸಹೋದ್ಯೋಗಿಯೋ ಈ ಗುಂಪಿಗೆ ಸೇರಿದವರೂ ಎಂದು ಮನಗಂಡ ತಕ್ಷಣ ಮನಸ್ಸಿಗೆ ತುಂಬಾ ನೋವಾದರೂ ಖಂಡಿತ ಮತ್ತೊಬ್ಬರ ಬಳಿ ಇದನ್ನು ಚರ್ಚಿಸದೆ ಅಂತಹ ಸವತಿ ಮತ್ಸರದ ಮನಸ್ಥಿತಿಯವರ ಸಂಗದಿಂದ ಎದ್ದು ನಡೆದುಬಿಡಿ.
ಆಪ್ತವಲಯದಲ್ಲಿ ಇರುವಂತಹ ಹಿತಶತ್ರುಗಳನ್ನು ಹೊರತುಪಡಿಸಿ ಮತ್ತೂ ಒಂದು ವರ್ಗವಿದೆ, ಅವರೆಂದರೆ ನಿಮ್ಮನ್ನು ಕಣ್ಣಲ್ಲೇ ದೂರದಿಂದ ಗಮನಿಸುತ್ತಾ ನಿಮ್ಮ ಬೆಳವಣಿಗೆಯ ಬಗ್ಗೆ ಊರಿಗೆಲ್ಲ ಗಾಸಿಪ್ ಮೂಲಕ ಅನುಮಾನ ಹುಟ್ಟುಹಾಕುವವರು. ಒಬ್ಬ ವ್ಯಕ್ತಿ ಹಣ ಮಾಡಿದ್ದರೆ ಯಾರನ್ನೋ ಮೋಸ ಮಾಡಿದನೆಂದೂ, ಅಧಿಕಾರಕ್ಕೆ ಏರಿದನೆಂದರೆ ಲೋಲುಪತನಕ್ಕೆ ಸಿಕ್ಕ ಪ್ರತಿಫಲ ಎಂದೂ ಅಥವಾ ಮನೆ ಕಟ್ಟಿದರೆ ಯಾರನ್ನೋ ಮುಳುಗಿಸಿದ ದುಡ್ಡು ಎಂದು ತಮಗೆ ಇಷ್ಟ ಬಂದ ರೀತಿ ಕಥೆ ಕಟ್ಟಿ ಪ್ರಚಾರ ಮಾಡುತ್ತಿರುತ್ತಾರೆ, ಇದು ಒಂದು ರೀತಿಯ ಗೀಳು, ಅವರಿಗೆ ಕೊಡುವ ವಿಘ್ನ ಸಂತೋಷ! ಆದರೆ ನೆನಪಿರಲಿ ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೇ ಎಷ್ಟು ಶ್ರಮ, ತ್ಯಾಗ ಅಥವಾ ತಪಸ್ಸು, ನಿದ್ದೆಗೆಟ್ಟ ರಾತ್ರಿಗಳು, ಅವನನ್ನು ಆ ಮಟ್ಟಕ್ಕೆ ಏರಿಸಿರುತ್ತದೆ ಎನ್ನುವುದು ಕೇವಲ ಎತ್ತರಕ್ಕೆ ಏರಿರುವವರಿಗೆ ಮಾತ್ರ ಅರಿವಿರುತ್ತದೆಯೇ ವಿನಃ ಇತರರಿಗಲ್ಲ!
ಇನ್ನು ನಾವು ಅರಿಯಬೇಕಾದ ಬಹಳ ಮುಖ್ಯ ವಿಚಾರ ಎಂದರೆ ಇಂತಹ ಸಂದರ್ಭದಲ್ಲಿ ನಮ್ಮ ಕಿವಿಗೆ ಇಂತಹ ವಿಚಾರ ಬಿದ್ದಾಗ ಕೇವಲ ಮುಗುಳ್ನಕ್ಕು ಮುನ್ನಡೆಯಬೇಕೇ ವಿನಃ ಅಂತಹವರಿಗೆ ಅಥವಾ ಅಂತಹ ಸುದ್ದಿ ತಲುಪಿಸಿದವರಿಗೆ ವಿವರಣೆ ಕೊಡಲು ಹೋಗಬಾರದು!  ಜಸ್ಟ್ ಇಗ್ನೋರ್ ದೆಮ್! ಕಾರಣ ನಿಮ್ಮ ಬಗ್ಗೆ ಯಾರೋ ಮಾತನಾಡುತ್ತಿದ್ದಾರೆ ಎಂದರೆ ಅದರರ್ಥ ನೀವು ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದೀರಿ ಎಂದು! ಇಂತಹ ಸಂದರ್ಭದಲ್ಲಿ ಒಂದು ಸಣ್ಣ ಮುಗುಳ್ನಗೆಯ ದೃಷ್ಟಿ ಬೀರಿ ಮುನ್ನಡೆಯುತ್ತಿರಬೇಕು.
ಬದುಕಿನ ವಿವಿಧ ಹಂತಗಳಲ್ಲಿ ಈ ರೀತಿಯ ಅನುಭವ ಪ್ರತಿಯೊಬ್ಬರಿಗೂ ಆಗಿಯೇ ಇರುತ್ತದೆ, ಕಾರಣ ನಾವು ಬದುಕುತ್ತಿರುವುದು ಸಮಾಜದ ನಡುವೆಯೆ ಅಲ್ಲವೆ?  ಬೇಡವೆಂದರೂ ಹೊಟ್ಟೆಕಿಚ್ಚಿನ ಮಂದಿ ಸಿಗುತ್ತಲೇ ಇರುತ್ತಾರೆ, ಆದರೆ ಅಂತಹವರ ಅಸಹನೆಗೆ ಕಾರಣವಾದ ನಿಮ್ಮ ಯಶಸ್ವೀ ಸಾಧನೆಯ ಹಾದಿಯನ್ನು ಬದುಕಿನ ರಹದಾರಿ ಮಾಡಿಕೊಂಡು ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಬೇಕೇ ವಿನಃ ಮತ್ತೊಬ್ಬರ ಹೊಟ್ಟೆಕಿಚ್ಚಿಗೆ ಆಹಾರವಾಗಿ ನಮ್ಮ ಸಾಧನೆ ಎಂದಿಗೂ ಕುಂಟಿತವಾಗಬಾರದು.
ಏನಂತೀರಿ?
-ಹೆಚ್. ಆರ್. ಪ್ರಭಾಕರ್

Friday, March 8, 2013

ಸುಳಿ

ಕನಸುಗಳ ಬೆನ್ನೇರಿ ವಾಸ್ತವದ ಅಡಿಯಲ್ಲಿ ಉತ್ಸಾಹದ ಉತ್ತುಂಗದಲಿ ತಣ್ಣನೆಯ ಗಾಳಿಯಲಿ ನಿನ್ನೆಡೆಗೆ ನೋಡುತ್ತಾ ಮುಂಗುರುಳ ಅಂಗಳದಲಿ ಬಿಸಿಯುಸಿರ ಬಂಧನದಲಿ ಆಂತರ್ಯದ ಅಂಕೆಯಲಿ ತಂಪೆರೆವ ನಿನ್ನ ನೋಟ ಬೀಳಿಸಿತೆನ್ನ ಪ್ರೀತಿಯೆಂಬ ಆ ನಿನ್ನ ಕೆನ್ನೆಯ ಗುಳಿಯಲ್ಲಿ ಬಿದ್ದು ಭಾವ ಪರವಶನಾಗಿ ಅರ್ಪಿಸಿಕೊಂಡಿದ್ದೇನೆ ನನ್ನನು ನಾನೇ ನಿನ್ನೆಡೆಗೆ ....!!!! -ಹೆಚ್. ಆರ್. ಪ್ರಭಾಕರ್

Friday, January 11, 2013

ನಾನು ...ಮತ್ತು ನಾನೂ ...........

ಬದುಕಿನ ಬಂಡಿ ಸಾಗುತ್ತಿದೆ ಸಾಗುತ್ತಿದೆ ಪ್ರತಿ ನಿತ್ಯ ಸ್ವಾರ್ಥ ದೆಡೆಗೆ ಅದು ಮನುಷ್ಯತ್ವದ ಮರೀಚಿಕೆಯಾ ಪ್ರೀತಿಯ ಅದೃಶ್ಯವಾ ನಂಬಿಕೆಗೆ ದ್ರೋಹವಾ ಉತ್ತರವಿಲ್ಲದ ಪ್ರಶ್ನೆಗಳು ಏನಾದರು ಸರಿ ನಾ ಸುಖಿಯಾಗಬೇಕು ಎಂಬ ಹಂಬಲವಾ ಪರ ಚಿಂತೆ ಎನಗೇಕೆ ಎಂಬ ವೇದಾಂತವಾ ಯಾರು ಏನಾದರೇನು ಎಂಬ ಭಂಡತನವಾ ಉತ್ತರವಿಲ್ಲದ ಪ್ರಶ್ನೆಗಳು... ಹುಟ್ಟಿನಿಂದಾ ಸಾವಿನ ವರೆಗೆ ಬಾಲ್ಯದಿಂದ ವ್ರುಧ್ಹಪ್ಯದ ವರೆಗೆ ಪ್ರತಿ ಕ್ಷಣ ತನ್ನ ವಿಶ್ವರೂಪ ತೋರುತ್ತಿದೆ ಈ ಸ್ವಾರ್ಥ ಇದು ಮನುಷ್ಯನ ಅತಿರೆಖವಾ ಆಸೆಬುರುಕುತನದ ಪರಮಾವಧಿಯಾ ಕ್ರೌರ್ಯದ ಪರಾಕಷ್ಟೇಯಾ ಉತ್ತರವಿಲ್ಲದ ಪ್ರಶ್ನೆಗಳು ಜೀವರಾಶಿಗಳಲ್ಲಿ ತಾನೇ ಶ್ರೇಷ್ಠ ಎಂದು ಬೀಗುವ ಅಹಂಭಾವ ಒಂದು ಕಡೆ ಎನಗಿಂತ ಬುದ್ದಿಜೀವಿಯಿಲ್ಲ ಎಂದು ತೋರ್ಪಡಿಸುವ ಕಾತುರ ಮತ್ತೊಂದೆಡೆ ಇವೆರಡರ ನಡುವೆ ಮತ್ತದೇ ಲೋಲುಪತನ ಅದೇ ನಿಕೃಷ್ಟತೆ ಅದೇ ಎಲ್ಲವೂ ತನಗೇ ಬೇಕೆಂಬ ಹಟಮಾರಿತನ ಇದಕ್ಕೆ ಕೊನೆ ಉಂಟಾ ಮತ್ತದೇ ಉತ್ತರವಿಲ್ಲದ ಪ್ರಶ್ನೆಗೆಳು......!!!!!!!!! -ಹೆಚ್.ಆರ್. ಪ್ರಭಾಕರ್

Thursday, April 26, 2012

ನೀನು ನಾನು ಮತ್ತು ಮಳೆ.......! ಜೋರು ಮಳೆಯ ಕಂಡು ನೆನಪಾದೆ ಗೆಳತಿ ಅಂದು ನಾವಿಬ್ಬರು ಜೊತೆ ಜೊತೆಗೆ ಹೆಜ್ಜೆ ಹಾಕಿದ್ದು ಇದೆ ಬೇಸಗೆ ಮಳೆಯಲ್ಲಿ ನನಗಿನ್ನು ಚಂದ ನೆನಪಿದೆ ನೀ ಅಂದು ಹೇಳಿದ್ದು ಇಂದು ಮಳೆ ಬಂದೆ ಬರುವುದೆಂದು ನಿನ್ನ ಮಾತು ನಿಜವೇ ಆಯಿತಲ್ಲ ಗೆಳತಿ ಇಳೆ ತಂಪಾಯಿತು ಅಂದು ಮಳೆಯಲ್ಲಿ ಅಂದು ನಡೆದಷ್ಟು ನಮಗೆ ಜಗತ್ತಿನ ಅರಿವೇ ಇರಲಿಲ್ಲ ತುಂತುರು ಮಳೆಯ ಆಸ್ವಾದಿಸುವ ಆ ನಮ್ಮ ಮನಸ್ತಿತಿ ಕಂಡು ಜನ ನೋಡುತ್ತಲೇ ಇದ್ದರು ನಮ್ಮತ್ತ ಆದರು ನಮಗೆಲ್ಲಿತ್ತು ಅವರತ್ತ ಗಮನ...? ಎಲ್ಲ ಮಳೆಯಲು ನನ್ನ ಪದೇ ಪದೇ ಕಾಡುವುದು ನೀನೆ ನಂತರ ಮಧುರ ನೆನಪುಗಳ ನೆನಪಿಸುವುವಳು ನೀನೆ ... ಬೇಸಗೆ ಮಳೆಯ ಜೊತೆ ಆರಂಭವಾದ ನಮ್ಮ ಬೆಸುಗೆ ಅದ್ಬುತ ವರ್ಷಧಾರೆ ... ನಾ ಇಳೆ ನೀ ಮಳೆ ಇದು ನಿರಂತರ ಸಮ್ಮಿಲನ...! -ಹೆಚ್.ಆರ್.ಪ್ರಭಾಕರ್

Monday, December 19, 2011



ಕೆಲವೇ ದಶಕಗಳ ಈ ಬದುಕಲ್ಲಿ
ಸಾವಿರ ಸಾವಿರ ಅನುಭವಗಳು
ಕೆಲವು ಸಿಹಿ ಕೆಲವು ಕಹಿ
ಆದರೂ ....
ಈ ಬದುಕು ನಮ್ಮದೇ

ಕೆಲವೊಮ್ಮೆ ಚಿಂತೆ
ಕೆಲವೊಮ್ಮೆ ಸಂತಸ
ಕೆಲವೊಮ್ಮೆ ದುಖದ ಒಡಲು
ಆದರೂ ....
ಈ ಬದುಕು ನಮ್ಮದು

ಬದುಕಿನ ಪಯಣದಲಿ
ಒಮ್ಮೊಮ್ಮೆ ಮೂಡುವ ಪ್ರಶ್ನೆ
ಇಲ್ಲಿ ಯಾರು ನಮ್ಮವರು ಯಾರು ಇತರರು.?
ಆದರೂ....
ಈ ಬದುಕು ನಮ್ಮದು

ಆಧುನಿಕತೆಯ ಗುಂಗಿನಲಿ
ಸಂಬಂಧಗಳು ಕುಸಿದು
ಕಂದಕ ಹೆಚ್ಚಾದರೂ ಸರಿ
ಆದರೂ....
ಈ ಬದುಕು ನಮ್ಮದು

ಅರಿಷಡ್ವರ್ಗಗಳ ಗೆದ್ದು
ಸಂತನಾಗುವ ಹಂಬಲ ಕೆಲವರಿಗೆ
ಇರುವ ಬದುಕಿನಲಿ ಎಲ್ಲ ಸುಖ
ಭೋಗಗಳ ಸವಿಯುವ ತುಡಿತ ಹಲವರಿಗೆ
ಆದರೂ...
ಈ ಬದುಕು ನಮ್ಮದು

ಕಾಲ ಚಕ್ರ ತಿರುಗಿ
ಭುವಿಯಲ್ಲಿ ಬದಲಾವಣೆಯ ಗಾಳಿ ಬೀಸಿದಾಗ
ಯಾಂತ್ರಿಕ ಬದುಕಿಗೆ
ಸಂಬಂಧಗಳ ಸಿಂಚನವಾಗಿ
ಆತ್ಮೀಯತೆಯ ಸೊಗಡು ಪಸರಿಸಿದಾಗ
ಬದುಕಿನ ಹಾದಿ ಬದಲಾದರೆ
ಆಗಲು ಈ ಬದುಕು ನಮ್ಮದೇ...!!!!

-ಹೆಚ್.ಆರ್.ಪ್ರಭಾಕರ್

Friday, December 16, 2011

Identity Crysis...ಮತ್ತು ಗೀಳು....!!!!



ನನ್ನೊಬ್ಬಳು ಗೆಳತಿ ಇದ್ದಳು..ಅವಳು ಹೀಗೆ ಮಾತಾಡುತ್ತ ಇರುತ್ತಿದ್ದಳು..

ಹೇಯ್..ನಿನಗೆ ಗೊತ್ತಾ ಮೊನ್ನೆ ಕಾಲೇಜಿಂದ ಮನೆಗೆ ಹೋಗ್ತಾ ಇದ್ದನಾ ಯಾರೋ ಒಬ್ಬ ಹುಡುಗ ಹಿಂದೆ ಹಿಂದೆ ಬರ್ತಾ ಇದ್ದ
ಸ್ವಲ್ಪ ಹೊತ್ತು ಹಾಗೆ ಫಾಲೋ ಮಾಡಿ ಹತ್ತಿರ ಬಂದ ಕಣೋ..ಬಂದವನೇ...
ಡೈರೆಕ್ಟ್ ಆಗಿ ಪ್ರಪೋಸ್ ಮಾಡಿ ಬಿಡೋದ..
ನನಗೆ ಸಿಟ್ಟು ಬಂತು..ಫುಲ್ ಕ್ಲಾಸ್ ತೊಗೊಂಡೆ..
ಗೊತ್ತ...! ಅದು ಹೇಗೆ ಅಷ್ಟು ಬೇಗ ಲವ್ ಆಗಿ ಬಿಡುತ್ತೆ..
.....
ಈ ತರ ಒಂದಲ್ಲ ಎರಡಲ್ಲ ಕಣೋ..ಎಷ್ಟು ಜನಾ..ಗೊತ್ತ...!!!???

ಇನ್ನೊಬ್ಬ ಗೆಳೆಯನಿದ್ದ ....
ಮಗಾ ನಿನಗೆ ಒಂದು ವಿಷ್ಯ ಗೊತ್ತ
ಏನು..?
ಮೊನ್ನೆ ನಿಮ್ಮ ಮನೆಗೆ ಬರ್ತಾ ಇದ್ದನಾ ..? ಪಕ್ಕದ ಕ್ರಾಸಿನ ನಾಲ್ಕನೇ..ಮನೆಯಲ್ಲಿ ಒಬ್ಬಳು ಹುಡುಗಿ ಇದಾಳೆ ಗೊತ್ತ
ಇಲ್ಲ ಗೊತ್ತಿಲ್ಲ ಹೇಳು..
ಎಷ್ಟು ಸುಂದರವಾಗಿದ್ದಾಳೆ..ಅಂದರೆ..ಅಬ್ಬಬ್ಬಾ...ಅಷ್ಟು ಚೆಂದ ಹುಡುಗಿಯನ್ನು..ನಾನು ನೋಡಿರಲೇ ಇಲ್ಲ..! ಗೊತ್ತ...
ಹೌದಾ..
ಸರಿ ನಡಿ ನೋಡೋಣಾ ...ಅಂತ ಹೊರಟೆವು..ಅವಳು ಆಗ ತಾನೇ ಮನೆಯಿಂದ ಹೊರಗೆ ಬಂದು ತನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಾ ಇದ್ದಳು..
ನೋಡಿದೆ..
ಇವನಿಗೆ ಹೇಳಿದೆ...ನಿನಗೆ ಕಣ್ಣು ಸರಿ ಇಲ್ವಾ..? ಅಂತ...
ಯಾಕೆ..ಅಂದ..
ಇವಳ ಸೌಂದರ್ಯ ಅಷ್ಟು ಹೊಗಳಿದೆ ಅಲ್ವಾ..ಅದಕ್ಕೆ..
..ಇಲ್ಲ ಕಣೋ ಆಗಲೇ ನೋಡಿದಾಗ ಬೇರೆ ಡ್ರೆಸ್ ನಲ್ಲಿ ಇದ್ದಳು..ಅಷ್ಟು ಚೆನ್ನಾಗಿ ಕಾಣುತ್ತ ಇದ್ದಳು..ಅಂದ..!
This is called escapism...!
................................................
ಇನ್ನು ಕೆಲವರು ಇರ್ತಾರೆ...ಅವರಿಗೆ ಒಂದು ಸಣ್ಣ ಬೆಕ್ಕು ಕಂಡರೂ...ಹುಲಿಯ ನೋಡಿದ ರೀತಿ ಕಥೆ ಹೇಳುತ್ತಾರೆ..
ಆ ಬೆಕ್ಕಿಗೆ..ಇಷ್ಟು ಉದ್ದ ಮೀಸೆ ಇತ್ತು ಗೊತ್ತ..ಇನ್ನು ಅದರ ಕಲರ್ ನೋಡಬೇಕಿತ್ತು..ನೀನು..ಪಟ್ಟೆ ಪಟ್ಟೆ ಇದ್ದು..ಹುಲಿ ತರಾ ಇತ್ತು..
ಅಂತ ಪುಂಖಾನು ಪುಂಖವಾಗಿ...ಕಥೆ..ಹೊಡೀತಾ ಇರ್ತಾರೆ..
...........
ಇನ್ನು ಕೆಲವರು ಇರ್ತಾರೆ..ನಾನು ನನ್ನ ಹೆಂಡತಿಯನ್ನು ಎಷ್ಟು ಕಂಟ್ರೋಲ್ ನಲ್ಲಿ ಇಟ್ಟಿದೀನಿ ಅಂದ್ರೆ...ನೋಡ್ಬೇಕು..ನೀನು...
ಅಂತಿರ್ತಾರೆ...
ಅಲ್ಲಿ ಹೋದರೆ ನಿಜ ಸ್ಥಿತಿ ..ಇದಕ್ಕೆ ತದ್ವಿರುದ್ದ ಆಗಿರುತ್ತದೆ..!
..............
ಇನ್ನು ಕೆಲವರು ಇರ್ತಾರೆ..ನನ್ನ ಮಗಳು ಎಷ್ಟು ಮುದ್ದಗಿದಾಳೆ ಅಂದ್ರೆ..ನೋಡ್ಬೇಕು..ನೀನು...ಅವಳ ಮಾತು...ತುಂಟ ತನ..ಎಲ್ಲ..ಥೇಟ್..ನನ್ನ ತರಾನೆ..ಗೊತ್ತ...
ಇವರಿಗೆ..ತುಂಟ ತನದ ಗಂಧ ಗಾಳಿಯು ಇರೋಲ್ಲ..ಇನ್ನು ಮಗು ಗೆ ಹೇಗೆ ಬಂದಿರೋಕೆ ಸಾಧ್ಯ..!
...........
ನನಗೆ ಪರಿಚಯದ ಒಬ್ಬ ಆಂಟಿ ಇದ್ದರು..
ಅವರು ಪ್ರತಿ ಮಾತಿಗೂ...ಹೀಗೆ ಅನ್ನೋರು..ನನ್ನು ಕಾಲೇಜಿಗೆ ಹೋಗೋವಾಗ..ಇಡೀ ಕಾಲೇಜೆ ನನ್ನ ಹಿಂದೆ ಇರ್ತಿತ್ತು..ಗೊತ್ತ..ಎಲ್ಲ ಹುಡುಗೀರು ನನ್ನ ಹತ್ರ ಬಂದು..ಏನೆ..ನೀನು ಅಷ್ಟು ಸುಂದರವಾಗಿದ್ದೆಯ..ನಿನ್ನಿಂದ..ಇಲ್ಲಿ ನಮ್ಮನ್ನ ನೋಡೋರು..ಯಾರು ಇಲ್ಲ..ಅಂತ ಗೋಳಾಡುತ್ತ ಇರುತ್ತಿದ್ದರು ಅಂತ ಅದೆಷ್ಟು ಸಲ ಹೇಳಿದ್ದರೋ..!
.....ಇವರಿಗೆ ಈಗ ಇವತ್ತು ವರ್ಷದ ಮೇಲೆ ವಯಸ್ಸು ಸಿಕ್ಕ ಸಿಕ್ಕವರ ಹತ್ರ ಎಲ್ಲ ಈ ವಿಚಾರ ಹೇಳಿ ಖುಷಿ ಪಡ್ತಾ ಇದ್ದರು..!
.............
ಇನ್ನು ಕೆಲವು ಹುಡುಗರು ಇರ್ತಾರೆ...
ಹೇಯ್..ಏನ್ ಗೊತ್ತ ಮಗಾ..ನಿನ್ನೆ ನಾನು ಊರಿಗೆ ಹೋಗಿದ್ದನಲ್ಲ..ಅಲ್ಲಿ ನಮ್ಮ ಕಸಿನ್ ಪಕ್ಕದ ಮನೇಲಿ ಒಬ್ಬ ಹುಡುಗಿ ಇದ್ದಳು..ಕಣೋ..ನನ್ನ ನೋಡಿ ಫಿದಾ ಆಗಿ ಬಿಟ್ಟಳು..
ಕಾಳು ಹಾಕಿದ್ದೆನಿ..ಮುಂದಿನ ಸಲಾ ಹೋದಾಗ ನೋಡು ಅವಳನ್ನು ಬೀಳಿಸೆ ಬೀಳಿಸ್ತೀನಿ...ಅಂತ ಜಂಬ ಕೊಚ್ಚಿಕೊಳ್ಳುತ್ತ ಇರುತ್ತಾರೆ..ಇದರಲ್ಲಿ ಒಂದು ಪರ್ಸೆಂಟ್ ನಿಜ ಇದ್ದರೆ ತೊಂಬತ್ತೊಂಬತ್ತು ಪರ್ಸೆಂಟ್ ಸುಳ್ಳು ಇರುತ್ತೆ....!
....................

ಇನ್ನು ಕೆಲವು ಮಂದಿ ಇರ್ತಾರೆ..ಇಡೀ ಗುಂಪಿನ ಗಮನಾ ನನ್ನ ಕಡೆ ಬರಲಿ ಎಂಬ ದೃಷ್ಟಿಯಿಂದ ಅಶ್ಲೀಲ ಜೋಕುಗಳನ್ನು ಹೇಳುವುದು, ಅಶ್ಲೀಲ ಸಂಬಾಷಣೆ ಜೋರಾಗಿ ಹೇಳುವುದು..ವಿಚಿತ್ರ ಹಾವ ಭಾವಗಳು ಮಾಡುತ್ತ ಇರುವುದು..ಮಾಡುತ್ತಿರುತ್ತಾರೆ..
u just ignore..them....!
..........................................
ಮೇಲಿನ ಉದಾಹರಣೆಗಳ ಸಹಿತ ಹೇಳಬಹುದಾದ ಒಂದೇ ವಿಚಾರ ಅಂದ್ರೆ..ಅದು..Identity Crysis ಅಥವಾ ಒಂದು ತೆರನಾದ ಗೀಳು..ಅನ್ನೋ ಮಾನಸಿಕ ವ್ಯಾಧಿಯಾ ಒಂದು ಲಕ್ಷಣ . ತನ್ನ ಗುಂಪಿನಲ್ಲಿ ತಾನು ಗ್ರೇಟ್ ಅನ್ನಿಸಿಕೊಳ್ಳಬೇಕು ಅನ್ನುವ ಹಪ ಹಪಿಯಲ್ಲಿ ಪುಂಖಾನು ಪುಂಖವಾಗಿ ಸುಳ್ಳು ಹೇಳುತ್ತಾ ಇರುತ್ತಾರೆ..ಈ ಸುಳ್ಳು ಎಷ್ಟು ಅತಿರೇಕಕ್ಕೆ ಹೋಗುತ್ತಿರುತ್ತೇ ಅಂದರೆ..ಒಮ್ಮೊಮ್ಮೆ ಅದು ಸಿವಿಯರ್ ಆಗಿ ಮಾನಸಿಕ ಖಾಯಿಲೆ ಯಾಗಿ ಕೂಡ ಹೊರ ಹೊಮ್ಮುತ್ತದೆ..ಬರೀ ಬ್ರಮಾ ಲೋಕದಲ್ಲಿ ಬದುಕನ್ನ ನಡೆಸುವಂತೆ..ಮಾಡುತ್ತದೆ..ಅಂತಹ ಮಂದಿಗೆ ವಾಸ್ತವ ಅರ್ಥ ಆಗುವುದೇ ಇಲ್ಲ..!

ಒಟ್ಟಾರೆ ಶತಾಯ ಗತಾಯ ಎಲ್ಲರ ಗಮನ ನನ್ನ ಕಡೆ ಸೆಳೆದು ನಾನು Centre of Attraction ಆಗಬೇಕು ಎಂಬ ಗೀಳಿನ ಲಕ್ಷಣ ಇದು..ಅದು ಗಾಸಿಪ್ ಮಾಡುವುದರ ಮೂಲಕ ಆಗಿರಬಹುದು..ತಮ್ಮನು ತಾವು ಗಾಸಿಪ್ ಗೆ ಒಳಪಡಿಸಿ ಕೊಳ್ಳುವುದು..ಇವೆಲ್ಲವೂ ಕೂಡ..identity crysis ನ ಒಂದೊಂದು ಮುಖ ಅಷ್ಟೇ..!

ನಿಮ್ಮ ಸುತ್ತ ಮುತ್ತಲು, ನಿಮ್ಮ ಗೆಳೆಯರ/ಗೆಳತಿಯರ ಬಳಗದಲ್ಲಿ ಇಂತಹ ಮಂದಿ ಇದ್ದರೆ....just ignore...!.


ಏನಂತೀರಿ...?

-ಹೆಚ್.ಆರ್.ಪ್ರಭಾಕರ್..